ಪಿತ್ತ -
ಯಕೃತ್ತಿನ (ಲಿವರ್) ಸ್ರಾವ (ಬೈಲ್). ಇದು ಉದರದ ಮೇಲ್ಭಾಗದಲ್ಲಿ ಬಲಗಡೆ ಇರುವ ಯಕೃತ್ತಿನಲ್ಲಿ ಉತ್ಪತ್ತಿಯಾಗಿ ಸಣ್ಣ ಕರುಳಿಗೆ ಹರಿದು ಬಂದು ಸೇರುತ್ತದೆ. ಆಹಾರದಲ್ಲಿರುವ ಮೇದಸ್ಸು ಶರೀರಗತವಾಗಲು ಪಿತ್ತ ಸಹಾಯ ಮಾಡುತ್ತದೆ. ಯಕೃತ್ತು ಪಿತ್ತರಸವನ್ನು ಸದಾ ಉತ್ಪತ್ತಿ ಮಾಡುತ್ತಿರುತ್ತದೆ-ದಿವಸಕ್ಕೆ ಸುಮಾರು ಒಂದೂವರೆ ಲೀಟರಿನಷ್ಟು (ಸುಮಾರು ಒಂದು ಸೇರು). ಆದರೆ ಸಣ್ಣಕರುಳಿಗೆ ಇದು ಬಂದು ಸೇರುವುದು ವ್ಯಕ್ತಿ ಆಹಾರ ತಿಂದಾಗ ಮತ್ತು ಅದು ಸಣ್ಣ ಕರುಳಿಗೆ ಬಂದು ಜೀರ್ಣವಾದಾಗ ಮಾತ್ರ. ಮಿಕ್ಕ ವೇಳೆ ಉತ್ಪತ್ತಿಯಾಗುವ ಸ್ರಾವ ಪಿತ್ತಕೋಶದಲ್ಲಿ ಅಡಕವಾಗಿರುತ್ತದೆ. ಪಿತ್ತಕೋಶ ಅದರ ನೀರಿನ ಭಾಗವನ್ನು ಸ್ವಲ್ಪಮಟ್ಟಿಗೆ ಹೀರಿ ಸಾರವನ್ನು ಹೆಚ್ಚಿಸುತ್ತದೆ. ಸಾರ ವರ್ಧಿತ ಪಿತ್ತ ಅದಕ್ಕೆ ಹತ್ತರಷ್ಟು ಮೂಲರಸ ಸಾಮಥ್ರ್ಯಯುತವಾಗಿರುತ್ತದೆ. ಆಹಾರ, ಅದರಲ್ಲೂ ಮೇದಸ್ಸು ಹೆಚ್ಚಾಗಿ ಇರುವ ಆಹಾರ, ಸಣ್ಣ ಕರುಳಿಗೆ ತಲುಪಿದಾಗ ಅದರ ಮೊದಲನೆಯ ಭಾಗದಲ್ಲಿ ಕೊಲೆಸಿಸ್ಟೊಕೈನಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗಿ ರಕ್ತಗತವಾಗುತ್ತದೆ. ಇದು ರಕ್ತಪರಿಚಲನೆಯಿಂದ ದೇಹದಲ್ಲೆ¯್ಲ ವ್ಯಾಪಿಸಿ ಪಿತ್ತಕೋಶಕ್ಕೆ ಒಯ್ಯಲ್ಪಟ್ಟಾಗ ಇದು ಕೂಡಲೇ ಸಂಕೋಚಿಸುತ್ತದೆ ಮತ್ತು ತನ್ನಲ್ಲಿರುವ ಪಿತ್ತವನ್ನು ಕರುಳಿನೊಳಕ್ಕೆ ತಳ್ಳುತ್ತದೆ. ಹೀಗಾಗಿ ಬೇಕಾದಾಗ ಮಾತ್ರ ಪಿತ್ತ ಕರುಳಿಗೆ ಸೇರುತ್ತದೆ.

ಕರುಳಿನಲ್ಲಿ ಪಿತ್ತ ಮುಖ್ಯವಾಗಿ ಮೇದಸ್ಸನ್ನು ಪ್ರನಿಲಂಬನ (ಇಮಲ್ಸಿಫೈ) ಮಾಡುತ್ತದೆ. ಅಂದರೆ ತುಂತುರುಗಳಾಗಿ ಛಿದ್ರಿಸುತ್ತದೆ. ಈ ತುಂತುರುಗಳು ಹಾಗೆಯೇ ರಕ್ತಗತವಾಗಬಹುದು ಮತ್ತು ಮೇದೋಜೀರಕ ರಸದಿಂದ ಚೆನ್ನಾಗಿ ಜೀರ್ಣಿಸಲ್ಪಡಬಹುದು. ಆದರೆ ಹೀಗೆ ಜೀರ್ಣಿಸಲ್ಪಟ್ಟರೂ ಅದು ರಕ್ತಗತವಾಗುವುದಕ್ಕೆ ಕೂಡ ಪಿತ್ತ ಅವಶ್ಯ. ಕರುಳಿನಲ್ಲಿ ಒಂದು ವಸ್ತು ರಕ್ತಗತವಾಗಬೇಕಾದರೆ ಸಾಧಾರಣವಾಗಿ ಅದು ನೀರಿನಲ್ಲಿ ವಿಲೀನವಾಗುವಂತಿರಬೇಕು. ಜೀರ್ಣಿಸಲ್ಪಟ್ಟ ಮೇದಸ್ಸು ಸ್ವಾಭಾವಿಕವಾಗಿ ನೀರಿನಲ್ಲಿ ವಿಲೀನವಾಗದು. ಆದರೆ ಜೊತೆಯಲ್ಲಿ ಪಿತ್ತವಿದ್ದರೆ ಅದು ಪ್ರನಿಲಂಬನವಾಗುತ್ತದೆ. ಪಿತ್ತಕ್ಕೆ ಹೀಗೆ ನೀರಿನಲ್ಲಿ ವಿಲೀನಿಸದಿರುವ ಪದಾರ್ಥವನ್ನು ಪ್ರನಿಲಂಬನ ಮಾಡುವ ವಿಶೇಷ ಗುಣವಿರುವುದರಿಂದ ಜೀರ್ಣವಾದ ಮೇದಸ್ಸು ರಕ್ತಗತವಾಗಲು ಅದು ಸಹಾಯ ಮಾಡುತ್ತದೆ. ಕೆಲವು ರೋಗಗಳಲ್ಲಿ ಪಿತ್ತ ಕರುಳಿಗೆ ಬಾರದೆ ನಿಂತುಹೋಗಬಹುದು. ಹೀಗಾದಾಗ ಪಿತ್ತ ರಕ್ತಗತವಾಗಿ ದೇಹವೆಲ್ಲ ವ್ಯಾಪಿಸಿ ಕಾಮಾಲೆ ರೋಗ ಬರುತ್ತದೆ. ಅಲ್ಲದೆ ಮೇದಸ್ಸು ಕರುಳಿನಲ್ಲಿ ಸರಿಯಾಗಿ ಜೀರ್ಣಿಸಲ್ಪಡದೆ, ಪ್ರನಿಲಂಬನವಾಗದೆ ಮಲದೊಡನೆ ವಿಸರ್ಜಿಸಲ್ಪಡುತ್ತದೆ. ಸಾಧಾರಣವಾಗಿ ಮೇದಸ್ಸಿನಲ್ಲೆ ಇದ್ದು ಅದರೊಡನೆ ರಕ್ತಗತವಾಗುವ ಎ, ಡಿ, ಇ, ಮತ್ತು ಕೆ. ಜೀವಸತ್ವಗಳೂ ಹೀಗೆಯೇ ದೇಹಕ್ಕೆ ಒದಗದೆ ಜೀವಸತ್ತ್ವ ನ್ಯೂನತಾ ಚಿಹ್ನೆಗಳು ತಲೆದೋರುತ್ತವೆ. 

ಪಿತ್ತದಲ್ಲಿ ಮೇದಸ್ಸು ರಕ್ತಗತವಾಗಲು ಸಹಾಯ ಮಾಡುವ ವಸ್ತುಗಳು ಕೋಲಿಕ್ ಆಮ್ಲ ಮತ್ತು ಅದರ ಲವಣಗಳು. ಪಿತ್ತದ ಬಣ್ಣ ಅದರಲ್ಲಿರುವ ಬಿಲಿರೂಬಿನ್ ಮತ್ತು ಬಿಲಿವರ್ಡಿನ್ ಎಂಬ ವಸ್ತುಗಳಿಂದ ಬರುತ್ತದೆ. ಇವುಗಳಿಗೆ ಕೆಂಪು ರಕ್ತಕಣಗಣಲ್ಲಿರುವ ಕೆಂಪು ಬಣ್ಣದ ಹೀಮೊಗ್ಲಾಬಿನ್ ಎಂಬ ಪದಾರ್ಥವೇ ಮೂಲ. ಕೆಂಪು ರಕ್ತಕಣಗಳು ನಾಶವಾದಾಗ ಹೀಮೊಗ್ಲಾಬಿನ್ ಹೊರಕ್ಕೆ ಬಂದು ದೇಹದಲ್ಲಿ ನಾನಾ ಕಡೆಗಳಲ್ಲಿರುವ ಫ್ಲಾಗೊಸೈಟುಗಳಿಂದ ಜೀರ್ಣಿಸಲ್ಪಟ್ಟು ಬಣ್ಣದ ಭಾಗವೇ ಬೇರೆ ಆಗುತ್ತದೆ. ಹೀಮೊಗ್ಲಾಬಿನ್ನಿನ ಈ ಬಣ್ಣದ ಭಾಗ ಪುನಃ ರಕ್ತಕ್ಕೆ ಸೇರಿ ಪರಿಚಲನೆಯಿಂದ ಯಕೃತ್ತನ್ನು ಸೇರಿದಾಗ ಅದು ಈ ಬಣ್ಣದ ಅಂಶವನ್ನು ಹೀರಿ ಪಿತ್ತರೂಪದಲ್ಲಿ ವಿಸರ್ಜಿಸಲ್ಪಡುತ್ತದೆ. ಈ ಲವಣಗಳು ಮತ್ತು ಬಣ್ಣದ ಜೊತೆಗೆ ಪಿತ್ತದಲ್ಲಿ ಕೊಲೆಸ್ಟಿರಾಲ್ ಎಂಬುದೂ ಒಂದು ವಿಸರ್ಜನ ವಸ್ತುವಾಗಿ ಇರುತ್ತವೆ. ದೇಹದಲ್ಲಿ ಜಾಸ್ತಿ ಕೊಲೆಸ್ಟಿರಾಲ್ ಇದ್ದಾಗ ಪಿತ್ತದಲ್ಲಿ ಅದರ ವಿಸರ್ಜನೆಯೂ ಹೆಚ್ಚು. ಇಂಥ ಸಂದರ್ಭದಲ್ಲಿ ಪಿತ್ತ ಕರುಳಿಗೆ ಸರಿಯಾಗಿ ಹರಿಯದೇ ತಡೆ ಉಂಟಾದರೆ ಅಥವಾ ಬ್ಯಾಕ್ಟೀರಿಯ ಸೋಂಕು ಉಂಟಾದರೆ ಅಥವಾ ಇನ್ನೇನಾದರೂ ಅವ್ಯಕ್ತ ಕಾರಣಗಳಿದ್ದರೆ ಪಿತ್ತದಲ್ಲಿರುವ ಕೊಲೆಸ್ಟಿರಾಲ್ ಘನೀಭವಿಸಿ ಕಲ್ಲುಗಳ ಹಾಗೆ ಮಾರ್ಪಟ್ಟು ಪಿತ್ತ ಪ್ರವಹಿಸುವ ನಾಳಗಳಲ್ಲಿ ಸಿಕ್ಕಿಹಾಕಿಕೊಂಡು ಉದರಶೂಲೆ ಉಂಟಾಗಬಹುದು.

ಪಿತ್ತದಿಂದ ಸಣ್ಣ ಕರುಳಿನಲ್ಲಿ ವಿಷಕ್ರಿಮಿಗಳ ಉತ್ಪಾದನೆ ಮತ್ತು ಸೋಂಕು ತಪ್ಪುತ್ತದೆ ಎಂಬ ನಂಬಿಕೆಯುಂಟು. ಈ ರಸ ಮಲವಿಸರ್ಜನೆಗೆ ಸಹಕಾರಿ. ಇದು ಆಗಿಂದಾಗ ಜಠರದೊಳಕ್ಕೆ ನುಗ್ಗಿ ಅಲ್ಲಿಯ ಆಮ್ಲವನ್ನು ಕಡಿಮೆಮಾಡಿ ಜಠರ ವ್ರಣವನ್ನು ತಪ್ಪಿಸುತ್ತದೆ.
(ಬಿ.ವಿ.ಪಿ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ